ಕರಂದೈ ತಮಿಳು ಸಂಗಂ ತಾಮ್ರ ಪಟಗಳು : (ಒಂದನೆಯ ರಾಜೇಂದ್ರ ಜೋಳನ) : ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಶಂ ತಾಲ್ಲೂಕಿನಲ್ಲಿರುವ ಪುತ್ತೂರುಗ್ರಾಮದ ಹೊಲವೊಂದರಲ್ಲಿ ನೆಲದಿಂದ ತೆಗೆಯಲಾದ ತಾಮ್ರಪಟಗಳು. ತಂಜಾವೂರಿನ ಬಳಿಯ 
ಕರಂದೈಯಲ್ಲಿ, ತಮಿಳು ಸಂಗಂ ಆವರಣದಲ್ಲಿ ಅವನ್ನು ಈಗ ರಕ್ಷಿಸಿಡಲಾಗಿದೆ.

ಇವು ಒಟ್ಟು 57 ತಾಮ್ರಪಟಗಳನ್ನು ಎರಡು ಮಜಬೂತಾದ ಉಂಗುರಗಳನ್ನೂ ಒಳಗೊಂಡಿದೆ. ತಾಮ್ರಪಟಗಳ ಸರಾಸರಿ ಅಳತೆ 42x24 ಸೆಂಮೀ. ಇವುಗಳೊಳಗೆ ಉಂಗುರವೊಂದನ್ನು ತೂರಿಸಲು ಸಾಧ್ಯವಾಗುವಂತೆ ರಂಧ್ರಗಳಿವೆ. ಇಡೀ ತಂಡದ ತೂಕ 111.73 ಕಿಗ್ರಾಂ. 
ಎರಡು ಉಂಗುರಗಳಲ್ಲಿ ಒಂದು ಒಡೆದಿದೆ. ಎರಡು ಉಂಗುರಗಳಿಗೂ ಮುದ್ರೆಯಿದೆ. ಇದರ ತಳವನ್ನು ಉಂಗುರಕ್ಕೆ ಬೆಸೆಯಲಾಗಿದೆ. ಉಂಗುರದ ದಪ್ಪ 6"; ವ್ಯಾಸ 18", ಮುದ್ರೆಯ ವೃತ್ತಾಕಾರ, ಅದರ ಸುತ್ತಳತೆ 5'1". ಉಂಗುರದ ತಳದಿಂದ ಎತ್ತರಕ್ಕೆ ಉಬ್ಬಿರುವ ಮುದ್ರೆಯ 
ಪೀಠವಾಗಿ ಅರಳಿದ ಕಮಲವಿದೆ. ಕಂಡಿಮಾಡಿ ಕೂರಿಸಿರುವ ಮುದ್ರೆಯ ಭಾಗದಲ್ಲಿಯ ಉಬ್ಬು ಚಿತ್ರಗಳಿವು; ನೊಣತೊಡಪ, ಮೇಲೆ ಚಾಮರ: ಕುಳಿತ ಭಂಗಿಯಲ್ಲಿರುವ ವ್ಯಾಘ್ರ ಮತ್ತು ಮತ್ಸ್ಯ, ಇವುಗಳ ಆಚೀಚೆ ದೀಪಸ್ತಂಭ, ಧ್ವಜ, ಕಠಾರಿ, ಬಲಕ್ಕೆ ಚುಚ್ಚುಗೋಲು. ಇವುಗಳ 
ಕೆಳಗೆ ಒಂದು ಗೆರೆ ಇದೆ. ಇದರ ಅಡಿಯಲ್ಲಿ, ಎಡದಿಂದ ಬಲಕ್ಕೆ ಸಾಲಾಗಿ ಒಂದು ತಮಟೆಯೂ ತಗ್ಗಾದ ಸಿಂಹಾಸನವೂ ಬಲಮುಖವಾಗಿ ನಿಮತ ವರಾಹವೂ ಸ್ವಾಸ್ತಕವೂ ಇವೆ. ಇದರ ತಳದಲ್ಲಿ ಕಮಲ. ಹುಲಿಯ ಚಿತ್ರ ಚೋಳರನ್ನೂ ಮೀನು ಪಾಂಡ್ಯರನ್ನೂ ವರಾಹ 
ಚಾಳುಕ್ಯರನ್ನೂ ಸಂಕೇತಿಸುತ್ತವೆ. ಉಳಿದ ಚಿತ್ರಗಳ ಪೈಕಿ ಛತ್ರಿ ಮತ್ತು ನೊಣತೊಡಪಗಳನ್ನು ಬಿಟ್ಟರೆ ಮಿಕ್ಕವು ಬಹುಶಃ ಅಷ್ಟ ಮಂಗಲದ ಪ್ರತೀಕಗಳಾಗಿವೆ. ಇವೆಲ್ಲವನ್ನೂ ವೃತ್ತಾಕಾರದಲ್ಲಿ ಕೊರೆಯಲಾಗಿದೆ. ಈ ವೃತ್ತದ ಹೊರೆಗೆ ಆಲೇಖ್ಯವೊಂದಿದೆ. ಇದು 
ರಾಜೇಂದ್ರಜೋಳನ ಶಾಸನವೆಂದೂ ಅರಸನ ಉಜ್ಜ್ವಲ ಮಣಿಮಕುಟದಲ್ಲಿ ಧರಿಸಿರುವಂಥದೆಂದೂ ಅಲ್ಲಿ ಹೇಳವಾಗಿದೆ. 
ಮೊದಲನೆಯ ಮೂರು ಪಟಗಳಲ್ಲಿರುವುದು ಸಂಸ್ಕೃತದಲ್ಲಿ ರಚಿಸಲಾದ ಗ್ರಂಥ ಪಾಠ. ಉಳಿದ ಪಟಗಳದು ತಮಿಳು ಭಾಷೆ, ತಮಿಳುಲಿಪಿ. 
ಸಂಸ್ಕೃತ ಪಾಠದಲ್ಲಿ ಚೋಳರ ಪೌರಾಣಿಕ ಮತ್ತು ಐತಿಹಾಸಿಕ ವಂಶಾವಳಿಯನ್ನು ಕೊಡಲಾಗಿದೆ. ನೀಡಲಾದ ದತ್ತಿಯ ವಿವರಗಳನ್ನೂ ಸಂಗ್ರಹವಾಗಿ ಕೊಡಲಾಗಿದೆ. ನರಾಕ್ಕನ್ ಮಾರಾಯನ್ ಜನನಾಥನ್ ಉರುಫ್ ರಾಜೇಂದ್ರಚೋಳ-ಬ್ರಹ್ಮಾಧಿರಾಜನ ಇಚ್ಛೆಯ ಮೇರೆಗೆ 
ದೊರೆಯು 51 ಗ್ರಾಮಗಳನ್ನು ಕೂಡಿಸಿ ಅಗ್ರಹಾರವೊಂದನ್ನು ರಚಿಸಿದ್ದನ್ನು ತಮಿಳಿನಲ್ಲಿ ಹೇಳಿದೆ. ಇದನ್ನು ದೊರೆಯ ತಾಯಿಯ ಹೆಸರಿನಲ್ಲಿ ತ್ರಿಭುವನ ಮಹಾದೇವಿ-ಚತುರ್ವೇದಿಮಂಗಲಂ ಎಂದು ಕರೆಯಲಾಗಿತ್ತು. ಈ ಅಗ್ರಹಾರಕ್ಕೆ ಒಳಪಟ್ಟ ಜಮೀನುಗಳನ್ನು 1,080 
ಬ್ರಾಹ್ಮಣರಿಗೆ ಹಂಚಲಾಗಿತ್ತು. ಅಗ್ರಹಾರದಲ್ಲಿ ಅಗತ್ಯವಾದ ಸೌಲಭ್ಯಗಳನ್ನೆಲ್ಲ ನಿರ್ಮಿಸಲಾಗಿತ್ತು. ಈ ದತ್ತಿಯನ್ನು ನೀಡಲಾದದ್ದು ದೊರೆಯ ಆಳ್ವಿಕೆಯ ಎಂಟನೆಯ ವರ್ಷದಲ್ಲಿ (1019-20).

ಸಂಸ್ಕೃತ ವಿಭಾಗದಲ್ಲಿ ಚೋಳರ ಬಗ್ಗೆ ನೀಡಲಾಗಿರುವ ಹೋಸ ವಿಚಾರಗಳಿವು : 1 ಸಿಂಹಳದ ರಾಜನನ್ನೂ ಪಾಂಡ್ಯದೊರೆಯನ್ನೂ ಅಜೇಯನೆನಿಸಿದ್ದ ಕೇರಳರಾಜನನ್ನೂ ಪಲ್ಲವರಾಜನನ್ನೂ ಪರಾಂತಕ ರಾಜ ಗೆದ್ದನಲ್ಲದೆ ಅವರ ಕೀರ್ತಿಯನ್ನೂ ಪ್ರದೇಶಗಳನ್ನೂ ಐಶ್ವರ್ಯ 
ವಾಹನಾದಿಗಳನ್ನೂ ವಶಪಡಿಸಿಕೊಂಡ. ಈ ಪಲ್ಲವರಾಜ ನಂದಿವರ್ಮನೇ ಆಗಿದ್ದಿರಬೇಕು. ಈತ ತೆಲ್ಲಾರುಗಳನ್ನು ಜಯಸಿದ್ದವ ( ಮೂರನೆಯ ನಂದಿವರ್ಮನಲ್ಲ). 2 ಸುಂದರ ಚೋಳದೊರೆ ವೀರಪಾಂಡ್ಯನನ್ನು ಸಹ್ಯಾದ್ರಿಗೆ ಓಡಿಸಿದನೆಂದು ಹೇಳಲಾಗಿದೆ. ಈತನೊಡನೆ 
ಕಾದಾಟ ನಡೆಸಿದ ಸಂಗತಿ ಇದೆ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ಸುಂದರ ಚೋಳನ ಮಗನಾದ ಎರಡನೆಯ ಆದಿತ್ಯ ಈ ವೀರಪಾಂಡ್ಯನನ್ನು ಕಾಳಗದಲ್ಲಿ ಕೊಂದನೆಂಬುದು ಸುವಿದಿತವಾಗಿದೆ. 3 ಒಂದನೆಯ ರಾಜರಾಜ ಅಶ್ವಾರೂಢನಾಗಿ ಏಕಾಂಗಿಯಾಗಿ 
ಸತ್ಯಾಶ್ರಯನ ವಿರುದ್ಧ ಕಾದಾಡಿ, ಅವನನ್ನೋಡಿಸಿ, ಆನೆ ಕುದುರೆ ಐಶ್ವರ್ಯ ವನಿತೆಯರನ್ನೆಲ್ಲ ವಶಪಡಿಸಿಕೊಂಡನೆಂದು ಹೇಳಲಾಗಿದೆ. ಈತ ಐಶ್ವರ್ಯವನ್ನು ವಶಪಡಿಸಿಕೊಂಡನೆಂಬುದು ಇವನ ತಂಜಾವೂರು ಶಾಸನದಿಂದ ದೃಢಪಟ್ಟಿದೆ. ಈ ವಿಜಯದಿಂದಾಗಿ 
ಸುವರ್ಣಪುಷ್ಪಗಳು ದೊರೆತವೆಂದು ಅಲ್ಲಿ ಹೇಳಲಾಗಿದೆ. ಆದರೂ ಈ ತಾಮ್ರಪಟಗಳು ಹೇಳುವಂತೆ ರಾಜರಾಜ ಮಾನ್ಯಖೇಟವನ್ನು ಗೆಲ್ಲುವ ತನ್ನ ಧ್ಯೇಯದಲ್ಲಿ ಜಯಗಳಿಸಲಾರದೆ ಹೋದ. ರಾಜರಾಜ ಹಳೆಯ ಮೈಸೂರು ರಾಜ್ಯದ ಉತ್ತರದ ಗಡಿಯಿಂದಾಚೆಗೆ ತನ್ನ 
ಅಧಿಕಾರವನ್ನು ವಿಸ್ತರಿಸಲೂ ಶಕ್ತನಾಗಲಿಲ್ಲವೆಂಬುದು ಈಗಾಗಲೇ ತಿಳಿದಿರುವ ವಿಷಯ. 4 ಮಾನ್ಯಖೇಟದ ವರೆಗೂ ರಾಜೇಂದ್ರ ದಂಡೆತ್ತಿ ಹೊಗಿ ತನ್ನ ತಂದೆಯ ಇಚ್ಛೆಯನ್ನು ಈಡೇರಿಸಿದನಲ್ಲದೆ ಆ ನಗರವನ್ನು ಅಗ್ನಿಗಾಹುತಿ ಮಾಡಿದ. 5 ರಾಜೇಂದ್ರ ಕಂಬುಜದ 
(ಕಾಂಬೋಡಿನ) ರಾಜನಿಂದ ಒಂದು ರಥವನ್ನು ಪಡೆದುದಾಗಿ ತಿಳಿದಿದೆ. ಆ ಕಂಬುಜರಾಜ ಶತ್ರುಗಳಿಂದ ತನ್ನ ರಾಜ್ಯವನ್ನು ರಕ್ಷಿಸುವ ಸಲುವಾಗಿ ರಾಜೇಂದ್ರನ ನೆರವನ್ನು ಬಯಸುತ್ತಿದ್ದ. ರಾಜೇಂದ್ರ ಮಲೇಷ್ಯ ಮತ್ತು ಇಂಡೊನೇಷ್ಯ ದ್ವೀಪಸ್ತೋಮಗಳ ಮೇಲೆ ನಡೆಸಿದ 
ಜಯಪ್ರದ ದಾಳಿಯ ಫಲವಿದು. ಈ ಗೆಳೆತನ ಒಂದನೆಯ ಕುಲೋತ್ತುಂಗನ ಕಾಲದವರೆಗೂ ಮುಂದುವರಿಯಿತು. ಆತ ಕಾಣಿಕೆಯಾಗಿ ಪಡೆದ ಅನಘರ್ಯ್‌ ಶಿಲೆಯೊಂದನ್ನು ಅವನ ಅಪ್ಪಣೆಯ ಮೇರೆಗೆ ಚಿದಂಬರದ ದೇವಾಲಯದ ಮುಂದಿನ ಮಂಟಪವೊಂದರ 

ಗೋಡೆಯಲ್ಲಿರಿಸಲಾಯಿತು. 6 ಆನೆಗಳ ಕಾಣಿಕೆಯನ್ನು ಈಗಿನ ಮಧ್ಯಪ್ರದೇಶಕ್ಕೆ ಸೇರಿದ ಬೆಸ್ತರ ಪ್ರದೇಶದಲ್ಲಿದ್ದ ಚಕ್ರಕ್ಕೋಟ್ಟಮ್ (ಚಕ್ರಗೋಷ್ಟ) ಅರಸನಿಂದ ರಾಜೇಂದ್ರ ದೊರೆ ಪಡೆದುದಾಗಿಯೂ ತಿಳಿಯುತ್ತದೆ. 7 ಅರಸ ಈ ದತ್ತಿಯನ್ನು ಕೊಡುವ ಸಮಯದಲ್ಲಿ 
ವ್ಯಾಘ್ರಾಗ್ರಹಾರವೆಂಬ ಹೆಸರಿದ್ದ ಚಿದಂಬರಂ ಅರಮನೆಯಲ್ಲಿ ರಾಜೇಂದ್ರಚೋಳ ಬ್ರಹ್ಮಾದಿರಾಜನ್ ಎಂಬ ಮಂಟಪದಲ್ಲಿ ಊಟ ಮಾಡುತ್ತಿದ್ದುದಾಗಿ ಹೇಳಲಾಗಿದೆ. ರಾಜನ ಈ ಮೌಖಿಕ ಆಜ್ಞೆಯನ್ನು ತಿರುಮಂದಿರವೋಲೈ ಅಥವಾ ಓಲೈ ಎಳುದುಂ ಎಂಬ ಅಧಿಕಾರಿ 
ಬರೆದುಕೊಂಡನೆಂದು ಹೇಳಲಾಗಿದೆ. ತೀಟ್ಟು ಎಂಬ ಹೆಸರಿನ ಆಜ್ಞೆಗೆ ಓಲೈನಾಯಗಂ ಎಂಬ ಅಧಿಕಾರಿಗಳು ಸಾಕ್ಷಿಗಳಾಗಿದ್ದರು. ಕರುಮಂ ಆರಾಯುಂ ಮತ್ತು ನಡುವಿರುಕ್ಕುಂ ಎಂಬ ಎರಡು ವಿಭಾಗಗಳ ಅಧಿಕಾರಿಗಳ ಮೂಲಕ ಈ ಆಜ್ಞೆಯನ್ನು ಕರುಮಂ ಪುರವು ವಾರಿ 
ಇಲಾಖೆಯ ಆರಾಯಂ ಎಂಬ ಕಾರ್ಯನಿರ್ವಾಹಾಧಿಕಾರಿಗಳಿಗೆ ನೀಡಲಾಯಿತು. ಇದನ್ನು ವರಿ ಎಂಬ ರೆವಿನ್ಯೂ ದಾಖಲೆ ಪುಸ್ತಕಗಳಲ್ಲಿ ಪುರಂವರಿ ಇಲಾಖೆಯವರು ದಾಖಲೆ ಮಾಡಲು ಈ ಅಧಿಕಾರಿಗಳು ವ್ಯವಸ್ಥೆ ಮಾಡಿದರು. ಈ ಇಲಾಖೆಯಲ್ಲೂ ಹಲವಾರು ಶ್ರೇಣಿಗಳ 
ನೌಕರರಿದ್ದರು. ಈ ದತ್ತಿಯಲ್ಲಿ ಸೇರಿರುವ ಸೇರದಿರುವ ಭೂಮಿಗಳ ವಿವರ, ಮೊದಲ ವರ್ಷದಲ್ಲಿ ಕಾಲುಭಾಗ ದಿಂದ ಪ್ರಾರಂಭವಾಗಿ ಕ್ರಮೇಣ ಅಧಿಕವಾಗಿ ನಾಲ್ಕನೆಯ ವರ್ಷದಲ್ಲಿ ಪುರ್ಣಾಂಶದ ವರೆಗೆ ಸ್ಥಳೀಯ ಅಧಿಕಾರಿಗಳಿಗೆ ಕೊಡಬೇಕಾದ ಬತ್ತರೂಪದ ಕಂದಾಯದ 
ವಿವರ, ಭೂಮಿಯ ಹಿಡುವಳಿಯನ್ನು ಹಳೆಯ ಪದ್ಧತಿಗೆ ಪರಿವರ್ತಿಸುವ ವಿಧಾನ ಇವನ್ನೆಲ್ಲ ಈ ಶಾಸನದಲ್ಲಿ ಹೇಳಲಾಗಿದೆ. ಈ ನಿರೂಪವನ್ನು ತಿರುಮುಗಂ ಅಥವಾ ಶ್ರೀಮುಖದ ರೂಪದಲ್ಲಿ ಇಲಾಖೆಯಿಂದ ನೀಡಲಾಗುತ್ತಿದೆಯೆಂದು ಹೇಳಲಾಗಿದೆ. ಈ ಉದ್ದೇಶಕ್ಕಾಗಿ 
ನಿಯೋಜಿಸಲ್ಪಟ್ಟ ಅಧಿಕಾರಿಗಳ ಸಹಿಯಿದೆ. ದತ್ತಿಗೆ ಒಳಪಟ್ಟ ಪ್ರದೇಶದ ಮೇರೆಯನ್ನು ನಿರ್ದೇಶಿಸಲು ಹೆಣ್ಣಾನೆಯೊಂದರಿಂದ ಈ ನೆಲವನ್ನು ಪ್ರದಕ್ಷಿಣೆ ಮಾಡಿಸಲಾಯಿತು. ತಿರುಮುಗಮ್ಮನ್ನು ತಿರುಮಂದಿರವೋಲೈ ಮತ್ತು ತಿರುಮಂದಿರಮೋಲೈನಾಯಗಂ ಎಂಬ 
ಅಧಿಕಾರಿಗಳು ಸಹಿ ಹಾಕಿ ಇದನ್ನು ದಾನಸ್ವೀಕೃತರಿಗೆ ಕೊಡಲಾಗಿದೆ. ಈ ಆಜ್ಞೆಯನ್ನು ಶಿಲೆ ಮತ್ತು ತಾಮ್ರಪಟಗಳ ಮೇಲೆ ಕೆತ್ತಿಸಬೇಕೆಂದು ಸೂಚಿಸಿ ಇದರ ಪ್ರತಿಗಳನ್ನು ಸ್ಥಳೀಯ ಅಧಿಕಾರಿಗಳಿಗೂ ನೀಡಲಾಗಿದೆ. 

ಇಡೀ ವಿಶ್ವದಲ್ಲೇ ದೊರಕಿರುವ ತಾಮ್ರ ಶಾಸನಗಳ ಪೈಕಿ ಇದು ಅತ್ಯಂತ ದೊಡ್ಡದು. 
ದತ್ತಿ ನೀಡಲಾದ ಪ್ರದೇಶ ಪುತ್ತೂರಿನ ಸುತ್ತಲೂ ಇದೆ. ಶಾಸನ ದೊರೆತಿರುವುದು ಇಲ್ಲೇ.                                            (ಕೆ.ಜಿ.ಕೆ.ಆರ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ